ಫಿಷರ್, ಹರ್ಬಟ್ ಆಲ್ಬರ್ಟ್ ಲಾರೆನ್ಸ್  1865-1940. ಪ್ರಸಿದ್ಧ ಬ್ರಿಟಿಷ್ ಚರಿತ್ರಕಾರ, ಶಿಕ್ಷಣ ತಜ್ಞ, ರಾಜಕಾರಣಿ. ಫಿಷರ್, ಲಂಡನ್ನಿನಲ್ಲಿ 1865 ಮಾರ್ಚಿ 21ರಂದು ಜನಿಸಿದ. ವಿನ್‍ಚೆಸ್ಟರ್ ಮತ್ತು ನ್ಯೂ ಆಕ್ಸ್‍ಫರ್ಡ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ. 1888ರಲ್ಲಿ ಆಕ್ಸ್‍ಫರ್ಡಿನ ನ್ಯೂ ಕಾಲೇಜಿನ ಸದಸ್ಯನಾದ. ಇತಿಹಾಸದ ಅಧ್ಯಯನದಲ್ಲಿ ಆಸಕ್ತಿ ಹೊಂದಿದ್ದ ಫಿಷರ್ ಕ್ಲಾಸಿಕ್ಸ್ ಅಧ್ಯಯನವನ್ನು ಕೈಬಿಟ್ಟು ಫ್ರಾನ್ಸ್ ಮತ್ತು ಜರ್ಮನಿ ದೇಶಗಳಲ್ಲಿ ಅಧ್ಯಯನ ಮಾಡಿದ. ಇತಿಹಾಸವನ್ನು ವೈಜ್ಞಾನಿಕವಾಗಿ ನೋಡುವ ಜರ್ಮನ್ನರ ದೃಷ್ಟಿಯನ್ನು ಪ್ರಬಲವಾಗಿ ವಿರೋಧಿಸಿದ ಮತ್ತು ಇತಿಹಾಸದ ಅಧ್ಯಯನದಲ್ಲಿ ವ್ಯಕ್ತಿಗತ ಮತ್ತು ಸರಳ ಮಾರ್ಗವನ್ನು ಪ್ರತಿಪಾದಿಸಿದ, 1891ರಲ್ಲಿ ಆಧುನಿಕ ಇತಿಹಾಸದ ಅಧ್ಯಾಪಕನಾಗಿ ನೇಮಿತನಾದ. ನ್ಯೂ ಕಾಲೇಜಿನಲ್ಲಿರುವಾಗಲೇ ಮಧ್ಯಯುಗದ ಸಾಮ್ರಾಜ್ಯ (ಮಿಡೀವಲ್ ಎಂಪೈರ್) ಎಂಬ ಕೃತಿಯನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸಿದ (1898). ಯಾರ್ಕ್‍ಷೈರಿನ ಷಫೀಲ್ಡ್ ವಿಶ್ವವಿದ್ಯಾಲಯಕ್ಕೆ 1912ರಲ್ಲಿ ಉಪಕುಲಪತಿಯಾಗಿ ನೇಮಿಸಲ್ಪಟ್ಟ. ಮುಂದೆ 1912ರಿಂದ 1926ರ ತನಕ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ. ಶಿಕ್ಷಣ ಮಂಡಳಿಯ ಅಧ್ಯಕ್ಷನಾಗಿ 1918ರಲ್ಲಿ ಜಾರಿಗೆ ಬಂದ ವಿದ್ಯಾಭ್ಯಾಸದ ಕಾಯಿದೆಗೆ ಮುಖ್ಯ ಕಾರಣಕರ್ತನಾದ. ಫಿಷರ್ 1921-22ರಲ್ಲಿ ಲೀಗ್ ಆಫ್ ನೇಷನ್ಸ್‍ನಲ್ಲಿ ಬ್ರಿಟಿಷ್ ಪ್ರತಿನಿಧಿಯಾಗಿ ನೇಮಿಸಲ್ಪಟ್ಟ. 1922ರಿಂದ 1926ರ ತನಕ ಪಾರ್ಲಿಮೆಂಟಿನ ಸದಸ್ಯನಾಗಿದ್ದ. 1925ರಿಂದ 1940 ಏಪ್ರಿಲ್ 18ರಂದು ನಿಧನನಾಗುವ ತನಕವೂ ನ್ಯೂ ಕಾಲೇಜಿನ ವಾರ್ಡನ್ ಆಗಿದ್ದ. ತಮ್ಮದೇ ಶಾಲೆಗೆ ಸೇರಿದ ಮೆಕಾಲೆ ಮತ್ತಿತರ ಇತಿಹಾಸಕಾರರ ವಾದವನ್ನು ಬೆಂಬಲಿಸಿ ರಚಿಸಿದ ವಿಗ್ ಹಿಸ್ಟೋರಿಯನ್ಸ್ ಎಂಬ ಈತನ ಕೃತಿ 1928ರಲ್ಲಿ ಹೊರಬಂದಿತು. ದಿ ಕಾಮನ್‍ವೀಲ್ (1924) ಮತ್ತು ಮೂರು ಸಂಪುಟಗಳಲ್ಲಿ ಹೊರಬಂದ ಯೂರೋಪಿನ ಚರಿತ್ರೆ (1935) ಮುಖ್ಯವಾದ ಇತರ ಕೃತಿಗಳು. 	
(ಆರ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ